ಎಚ್.ತಿಪ್ಪೇರುದ್ರಸ್ವಾಮಿ : -
	1928-. ವಿದ್ವಾಂಸರು, ವಿಮರ್ಶಕರು, ಕಾದಂಬರಿಕಾರರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು. ಅದಕ್ಕೆ ಪೂರಕವಾದ ಪರಿಸರ. ಹೊನ್ನಾಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆಯ ಓದನ್ನೂ ಮುಗಿಸಿದರು. ಗುರುಗಳಾದ ಕೆ. ನರಸಿಂಹಶಾಸ್ತ್ರಿಗಳಿಂದ ಕನ್ನಡದ ಬಗೆಗಿನ ಒಲವು ಜಾಗೃತವಾಯಿತು. ಆನರ್ಸ್ ಮುಗಿಸಿ 1952ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಶ್ರೇಣಿಯಲ್ಲಿ ಎಂ.ಎ. ಪದವಿ ಪಡೆದರು. 1952ರಿಂದ ಅಧ್ಯಾಪಕವೃತ್ತಿ ಪ್ರಾರಂಭಿಸಿದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಕ್ಕೆ ಬಂದರು. 1973ರಿಂದ 75ರವರೆಗೆ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿದ್ದು ಈಗ ಶಿವಮೊಗ್ಗ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ (1977). 

	ಕಾದಂಬರಿ, ನಾಟಕ, ಕಥೆ ಮತ್ತು ಕವನ ಕ್ಷೇತ್ರಗಳಲ್ಲಿ ಇವರು ಸೃಷ್ಟ್ಯಾತ್ಮಕ ಬರವಣಿಗೆಗಳನ್ನು ನೀಡಿದ್ದಾರೆ. ಧರ್ಮ ಮತ್ತು ಕರ್ನಾಟಕ ಸಂಸ್ಕøತಿಗೆ ಸಂಬಂಧಿಸಿದ ಸಂಶೋಧನ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ವಿಮರ್ಶೆ ಅದರಲ್ಲೂ ವಿಶೇಷವಾಗಿ ವಚನಸಾಹಿತ್ಯಕ್ಕೆ ಸಂಬಂಧಿಸಿದಂತೆಯೂ ಕಾವ್ಯ ಮೀಮಾಂಸೆ ಮತ್ತು ವಿಮರ್ಶಾತತ್ತ್ವಗಳನ್ನು ಕುರಿತೂ ಬರೆದಿದ್ದಾರೆ. ಬೇಂದ್ರೆ, ಮಾಸ್ತಿ, ಕುವೆಂಪು, ಡಿ.ವಿ.ಜಿ. ಮುಂತಾದ ಸಾಹಿತಿಗಳು ಇವರ ಮೇಲೆ ಪ್ರಭಾವ ಬೀರಿದ್ದಾರೆ. ಹಲವು ವರ್ಷ ಮಾನಸ ಗಂಗೋತ್ರಿಯ ಗಾಂಧೀಭವನದ ನಿರ್ದೇಶಕರಾಗಿ ಕೆಲಸಮಾಡಿರುವ ಇವರು ಗಾಂಧೀವಾದಿಯಾಗಿದ್ದಾರೆ. ಇವರ ಕೃತಿಗಳನ್ನು ಗಮನಿಸಿದಾಗ ಎದ್ದುಕಾಣುವ ಅಂಶ-ಶರಣರ ತತ್ತ್ವ ಮತ್ತು ಜೀವನ ಹೇಗೆ ಇವರನ್ನು ವಿಶೇಷವಾಗಿ ಆಕರ್ಷಿಸಿದೆ ಎಂಬುದು. ಕರ್ನಾಟಕ ಇತಿಹಾಸ ಇವರಿಗೆ ಬಹು ಪ್ರಿಯವಾದ ವಿಷಯ.

	ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಇವರ ಮಹಾ ಪ್ರಬಂಧ ಶರಣರ ಅನುಭಾವ ಸಾಹಿತ್ಯ 1963ರಲ್ಲಿ ಪ್ರಕಟವಾಗಿದೆ. ಶರಣರ ಅನುಭಾವ ಸಾಹಿತ್ಯದ ಸಮಗ್ರ ಸ್ವರೂಪವನ್ನು ವಿಶೇಷವಾಗಿ ಅವರ ವಚನಗಳನ್ನು ಮುಂದಿಟ್ಟುಕೊಂಡು ಇಲ್ಲಿ ಪರಿಶೀಲಿಸಲಾಗಿದೆ. ವೀರಶೈವ ಸಿದ್ಧಾಂತದ ವಿಕಾಸ, ಶರಣರ ತತ್ತ್ವ ಮತ್ತು ಸಾಧನೆ, ಅವರ ವಿಚಾರ ಮತ್ತು ಅನುಭಾವ ಮಾರ್ಗ, ವಚನಗಳ ಸಾಹಿತ್ಯಸ್ವರೂಪ ಮುಂತಾದ ಅಂಶಗಳನ್ನು ಇಲ್ಲಿ ವಿವೇಚಿಸಲಾಗಿದೆ. ವಚನಗಳಲ್ಲಿ ವೀರಶೈವಧರ್ಮ ಎಂಬ ಗ್ರಂಥದಲ್ಲಿ (1963) ವೀರಶೈವಧರ್ಮದ ಹಿನ್ನೆಲೆಯಲ್ಲಿ ರಚಿತವಾದ ವಚನಗಳಲ್ಲಿ ಅಭಿವ್ಯಕ್ತವಾಗಿರುವ ಮೂಲಭೂತ ತತ್ತ್ವಗಳನ್ನು ವಿವೇಚಿಸಲಾಗಿದೆ. ಇವರ ಕರ್ನಾಟಕ ಸಂಸ್ಕøತಿ ಸಮೀಕ್ಷ (1968) ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದೆ. ಕರ್ನಾಟಕ ಸಂಸ್ಕøತಿ ಪರಂಪರೆಯನ್ನು ಇಡಿಯಾಗಿ ನೋಡುವ ಪ್ರಯತ್ನ ಇಲ್ಲಿಯದು. ಭಾರತೀಯ ಸಂಸ್ಕøತಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ರಾಜಕೀಯ, ಜನಪದ, ಶಾಸನ, ಸಾಹಿತ್ಯ, ವಾಸ್ತು, ಶಿಲ್ಪ, ಸಂಗೀತ, ನೃತ್ಯ, ಚಿತ್ರಕಲೆಗಳನ್ನು ಕುರಿತಿರುವ ಈ ಗ್ರಂಥದ ಹರಹು ಅಚ್ಚರಿಗೊಳಿಸುವಂಥದು. ಇಲ್ಲಿ ಒಂದೊಂದು ಅಧ್ಯಾಯದ ವಿಷಯವೂ ಒಂದೊಂದು ವ್ಯಾಪಕ ಕ್ಷೇತ್ರ. ಇಲ್ಲಿ ಕರ್ನಾಟಕ ಸಂಸ್ಕøತಿ ಪರಂಪರೆಯನ್ನು ಸಮೀಕ್ಷಿಸುವ ನಿಟ್ಟಿನಿಂದ ಈ ಎಲ್ಲ ವಿಷಯಗಳ ಒಪ್ಪಂದವನ್ನು ಸೆರೆಹಿಡಿಯಲು ಯತ್ನಿಸಲಾಗಿದೆ. 

	ಶೂನ್ಯ ತತ್ತ್ವ ವಿಕಾಸ (1963), ಶೂನ್ಯ ಸಂಪಾದನೆ (1963), ಶೂನ್ಯ ಸಂಪಾದನೆ (ವಿವರಣಾತ್ಮಕ ಪರಿಚಯ) (1973)-ಈ ಮೂರು ಮುಖ್ಯ ಗ್ರಂಥಗಳಲ್ಲಿ ಶೂನ್ಯ ಸಂಪಾದನೆಗಳು ಬೆಳೆದುಬಂದ ಬಗೆ, ಅಲ್ಲಿಯ ಆಧ್ಯಾತ್ಮಿಕ ನಿಲುವು, ಅಲ್ಲಿಯ ವ್ಯಕ್ತಿಗಳು ಮತ್ತು ಪ್ರಸಂಗಗಳು, ಶೂನ್ಯ ಸಂಪಾದನೆಯ ಸಾಹಿತ್ಯ ಸ್ವರೂಪ ಮತ್ತು ಸಾಧನೆ - ಈ ಮುಂತಾದ ಅಂಶಗಳನ್ನು ಚರ್ಚಿಸಲಾಗಿದೆ. ವಿಮರ್ಶೆಯ ಉದ್ದೇಶ, ವ್ಯಾಪ್ತಿ, ಸ್ವರೂಪ, ಆನ್ವಯಿಕ ವಿಮರ್ಶೆ-ಈ ಸಂಗತಿಗಳನ್ನು ಕುರಿತ ಗ್ರಂಥ ಸಾಹಿತ್ಯವಿಮರ್ಶೆಯ ಮೂಲತತ್ತ್ವಗಳು (1970). ಕುವೆಂಪು ಅವರ ನಾಟಕಗಳನ್ನು ಕುರಿತ ಅಧ್ಯಯನ-ಕುವೆಂಪು ಅವರ ನಾಟಕಗಳು (1969), ಈ ಗುಂಪಿಗೆ ಸೇರುವ ಅವರ ಇತರ ಗ್ರಂಥಗಳು- ಚಾಮರಸ, ಭೀಮಕವಿ, (1970), ಕನ್ನಡದಲ್ಲಿ ಅನುಭಾವ ಸಾಹಿತ್ಯ (1960).

	ಸಂಶೋಧನೆ, ವಿಮರ್ಶೆಗಳನ್ನು ಬಿಟ್ಟರೆ ತಿಪ್ಪೇರುದ್ರಸ್ವಾಮಿಯವರ ಹಿರಿಯ ಕೃಷಿಕ್ಷೇತ್ರ-ಕಾದಂಬರಿ, ಕರ್ನಾಟಕದ ಐತಿಹಾಸಿಕ ಸಂಗತಿಗಳು ಇವರ ಕಾದಂಬರಿಯ ವಸ್ತು. ಶರಣರ ಮತ್ತು ಇತರ ಇತಿಹಾಸ ಮುಖ್ಯರ ಉನ್ನತ ವ್ಯಕ್ತಿತ್ವವನ್ನು ಕಾದಂಬರಿ ರೂಪದಲ್ಲಿ ಸೆರೆಹಿಡಿಯುವುದು ಇಲ್ಲಿ ಅವರ ಉದ್ದೇಶ ಅಲ್ಲಮಪ್ರಭುವನ್ನು ಕುರಿತ ಕಾದಂಬರಿಯಾದ ಪರಿಪೂರ್ಣದೆಡೆಗೆ ಎಂಬುದು 1959ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆಯಿತು. ಅಕ್ಕ ಮಹಾದೇವಿಯನ್ನು ಕುರಿತ ಕದಳಿಕರ್ಪೂರ (1971), ಇಮ್ಮಡಿ ಪುಲಕೇಶಿಯನ್ನು ಕುರಿತ ಸತ್ಯಾಶ್ರಯ ಸಮ್ರಾಜ್ಯ (1967), ವಿಜಯನಗರದ ಪ್ರೌಢದೇವರಾಯನಿಗೆ ಸಂಬಂಧಿಸಿದ ವಿಜಯಕಲ್ಯಾಣ (1969), ಹರಿಹರ ರಾಘವಾಂಕರನ್ನು ಕುರಿತ ವಚನ ವಿರೂಪಾಕ್ಷ (1972)- ಇವು ಇವರ ಇತರ ಕಾದಂಬರಿಗಳು. ನಿಜಗುಣರ ವಿಷಯವಾಗಿ ಪರಂಪರೆಯಿಂದ ಬೆಳೆದುಬಂದ ಕಥೆಯ ಸೂಕ್ಷ್ಮ ಎಳೆಯನ್ನಾಧರಿಸಿ ಅವರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಅವರ ಜೀವನವನ್ನು ಕಟ್ಟಲು ಯತ್ನಿಸಿರುವುದನ್ನು ಜ್ಯೋತಿ ಬೆಳಗುತಿದೆ (1971) ಎಂಬ ಕಾದಂಬರಿಯಲ್ಲಿ ಕಾಣಬಹುದು. ಬಸವಣ್ಣನವರ ವಿವಿಧ ಮುಖಗಳನ್ನು ಕಾದಂಬರಿಯ ರೂಪದಲ್ಲಿ ಅಡಕಗೊಳಿಸುವ ಯತ್ನದ ಫಲವಾಗಿ 1072 ಪುಟಗಳ ಮೂರು ಸಂಪುಟಗಳ ಕರ್ತಾರನ ಕಮ್ಮಟ (1972) ಬೆಳಕು ಕಂಡಿದೆ. 

	ಘಟಿವಾಳಯ್ಯ, ಮೋಳಿಗೆಯ ಮಾರಯ್ಯ ಮತ್ತು ಸಕಲೇಶ ಮಾದರಸರನ್ನು ಕುರಿತ ನಾಟಕಗಳೇ (1973) `ಶರಣರ ಮೂರು ನಾಟಕಗಳು ಎಂಬುದು. ಇವರ ಉಳಿದ ನಾಟಕಗಳು - ವಿಧಿಪಂಜರ (1960) ಮತ್ತು ನಿಜಗುಣ ಶಿವಯೋಗಿ , ಕಥೆ, ಕವನ ಮತ್ತು ಜೀವನಚರಿತ್ರೆಯ ಕ್ಷೇತ್ರಗಳಲ್ಲೂ ಇವರು ಕೈಯಾಡಿಸಿದ್ದಾರೆ. ವಿದ್ಯಾರ್ಥಿ ದಿಶೆಯಲ್ಲೇ ಹೊರತಂದ ಕವನ ಸಂಕಲನ ತಪೋರಂಗ. 1961ರಲ್ಲಿ ಬಂದ ಸಾಹಿತ್ಯ ಚಿತ್ರಗಳು. ಒಂದು ಕಥಾ ಸಂಕಲನ ಶಿಸ್ತುಗಾರ ಶಿವಪ್ಪನಾಯಕ (1966) ಎಂಬ ಕೃತಿ ಶಿವಪ್ಪನಾಯಕನ ಜೀವನಚರಿತ್ರೆ; ಎ. ಆರ್. ಕೃ. ಅವರ ಜೀವನ ಮತ್ತು ಸಾಧನೆ (ಹಾ. ಮಾ. ನಾಯಕರೊಂದಿಗೆ) ಪ್ರಸಾದ (1964), ಶ್ರೀಶರಣ ಚರಿತಮಾನಸ (1956) ಆಮುಗಿ ದೇವಯ್ಯಗಳ ಸಾಂಗತ್ಯ (1965), ಸಿದ್ಧರಾಮಚರಿತ (1975)-ಇವು ತಿಪ್ಪೇರುದ್ರಸ್ವಾಮಿಗಳ ಸಂಪಾದಿತ ಕೃತಿಗಳು.
(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ